Monday, November 3, 2014

Balanced Life 


ಶಾಲಿನಿಯ ಅಣ್ಣ ಬೈಕ್ ಓಡಿಸುವಾಗ ಸಾಮಾನ್ಯವಾಗಿ ಹೆಲ್ಮೆಟ್ ಧರಿಸುತ್ತಾನೆ. ಕಾಲೇಜು ಅವಳನ್ನು ಕರೆಸಿಕೊಂಡಾಗಲೆಲ್ಲಾ ಅವನ ಬೈಕಿನಲ್ಲೇ ಹೋಗುವುದು ರೂಢಿ. 


ನನ್ನ ಪ್ರಕಾರ, ಅವಳ ಗೆಳತಿಯರೆಲ್ಲ ನೋಡಲು ಚೆನ್ನಾಗಿದ್ದಿರಬಹುದು. ಅವಳ  ಅಣ್ಣ, ಅವಳು ಕೇಳಿದಾಗಲೆಲ್ಲ ಕಾಲೇಜಿಗೆ ಡ್ರಾಪ್ ಮಾಡುವದನ್ನು ನೋಡಿದರೆ ನನಗೆ ಬೇರೆ ಯಾವುದೇ ಕಾರಣ ಕಾಣುವುದಿಲ್ಲ. 

ಸೂಕ್ಷ್ಮ ಬುದ್ಧಿಯ ಶಾಲಿನಿಗೆ, ತನ್ನ ಮನೆ ಓಣಿಯ ಕೆಲವರಿಗೆ ತನ್ನ ಮೇಲೆ ತುಂಬಾ ಕಾಳಜಿ ಹಾಗೂ ಪ್ರೀತಿಯಿದೆಯೆಂದು ತಿಳಿದಿದೆ. ಅದಕ್ಕಾಗಿಯೇ, ಅವರೆಲ್ಲಾ ತನ್ನ ತಂದೆ ತಾಯಿಯ ಬಳಿ ಬಂದು, "ನಿಮ್ಮ ಮಗಳು ಅದ್ಯಾವುದೋ ಹುಡುಗನ ಗಾಡಿಯ ಮೇಲೆ ಊರೂರು ತಿರ್ಗ್ತಾಳೆ" ಎಂದು ಹೇಳುವ ಕಷ್ಟ ತೆಗೆದುಕೊಳ್ಳುವುದು ಬೇಡವೆಂದು, ಇತ್ತೀಚೆಗೆ ಬೈಕ್ ಮೇಲೆ ಹೋಗುವಾಗ ಮುಖ ಮುಚ್ಚಿಕೊಳ್ಳಲಾರಂಭಿಸಿದ್ದಾಳೆ. ಅಣ್ಣನು ಹೆಲ್ಮೆಟ್ ಧರಿಸುವುದರಿಂದ ಅವನ ಗುರುತು ಇವರಾರಿಗೂ ಸಿಗದಿರುವುದಕ್ಕೇ ಈ ರೀತಿ ಮಾಡುತ್ತಿರುವುದಾಗಿ ತನ್ನ ತಂದೆಯ ಬಳಿ  ಈಗಾಗಲೇ ಹೇಳಿದ್ದಾಳೆ.


ಆದರೆ......
ಅವಳ ಕುಟುಂಬದ ಮೇಲೆ ಅಪಾರ ಕಾಳಜಿ ಇಟ್ಟುಕೊಂಡವರು, ಅವಳ ಅಣ್ಣನ ಹೆಲ್ಮೆಟ್ ಶೈಲಿ, ದೇಹದ ಗಾತ್ರ , ಬೈಕಿನ ಹೆಸರು ಮತ್ತಿತರ ಗುಣಲಕ್ಷಣಗಳನ್ನೂ ಪಟ್ಟಿ ಮಾಡಿಟ್ಟುಕೊಂಡಿರುವುದು ಬಹುಷಃ ಆಕೆಗೆ ತಿಳಿದಿಲ್ಲ.


ಇತ್ತೀಚೆಗೆ ಮಗಳಿಂದ ಪ್ಯಾಕೆಟ್ ಮನಿಯ ಬೇಡಿಕೆಯು ಕಡಿಮೆಯಾಗಿರುವುದನ್ನು ನೋಡಿ ಆಕೆಯ ತಂದೆಗೆ, ತನ್ನ ಮಗಳಿಗೆ  ಬಾಯ್ ಫ್ರೆಂಡ್ಸ್ ಇರುವುದು  ಖಚಿತವಾಗಿದೆ. ತನ್ನ ಅನುಪಸ್ಥಿತಿಯಲ್ಲಿ ಅವಳನ್ನು ಕಾಯುವ ನಾಯಿಗಳ  ವ್ಯವಸ್ಥೆಯಾಗಿದೆ ಎಂದುಕೊಂಡು  ಸುಮ್ಮನಿದ್ದುಬಿಟ್ಟಿದ್ದಾರೆ. 


ತನ್ನ ಬಾಯ್ ಫ್ರೆಂಡ್ಸ್  ಬಳಿ,  ತಾನು ಅನುಸರಿಸಿದ ಉಪಾಯದಿಂದ ಮನೆಯವರಿಗೆ ಯಾವುದೇ ರೀತಿಯ ಅನುಮಾನ ಬರಲು ಸಾಧ್ಯವೇ ಇಲ್ಲವೆಂದು ಶಾಲಿನಿ ಖುಷಿಪಟ್ಟುಕೊಳ್ಳುತ್ತಾಳೆ. ಆದರೆ, ಅವಳು ಹಲುಬುವುದನೆಲ್ಲಾ ಅವಳ ಗಳೆಯರು ಗಮನವಿಟ್ಟು ಕೇಳಿಯೇಬಿಡುತ್ತಾರೆಂದು ನನಗನಿಸುವುದಿಲ್ಲ.


ಬೈಕ್, ಬೈಕ್ ಸವಾರನ ಹೆಲ್ಮೆಟ್ ಶೈಲಿ ಹಾಗೂ ದೇಹದ ಗಾತ್ರ ಬದಲಾದಾಗಲೆಲ್ಲ, ಮುಖ ಮುಚ್ಚಿಕೊಂಡರೂ ಸಹ ಅವಳನ್ನು ಪ್ರೀತಿಯಿಂದ  ಗುರುತಿಸಿ, ಮನೆ ಓಣಿಯವರೆಲ್ಲಾ ತಮ್ಮ ತಮ್ಮಲ್ಲೇ ಅವಳ ಮೇಲೆ ಕಾಳಜಿ ತೋರಿಸುತ್ತಾರೆ. ಅವಳ ಕುಟುಂಬದವರ  ಬಗ್ಗೆ ಮಾತನಾಡುವಷ್ಟು ಮಾತನಾಡಿ ಬೇರೆಯವರ ಮನೆಯ ಸುದ್ದಿ  ಬೇಡವೆಂದು ಸುಮ್ಮನಾಗುತ್ತಾರೆ.